ತ್ರಿವಿಕ್ರಮ -
ಪ್ರಾಕೃತ ಶಬ್ದಾನುಶಾಸನದ ಕರ್ತೃ. ಈ ಗ್ರಂಥದಿಂದ ಇತನ ಬಗ್ಗೆ ತಿಳಿದುಬರುವ ಅಂಶಗಳಿವು. ಬಾಣನ ವಂಶಕ್ಕೆ ಸೇರಿದವ. ತಾತ ಆದಿತ್ಯವರ್ಮನ್, ತಂದೆತಾಯಿಗಳು ಮಲ್ಲಿನಾಥ ಮತ್ತು ಲಕ್ಷ್ಮಿ. ಸಹೋದರ ಭಾಮ. ಜೈನಾಗಮಪಂಡಿತ ಅರ್ಹನಂದಿ ಗುರು. ತನೊಬ್ಬ ಶ್ರೇಷ್ಠ ಕವಿಯೆಂದು ಹೇಳಿಕೊಳ್ಳುತ್ತಾನಾದರೂ ತ್ರಿವಿಕ್ರಮನ ಯಾವ ಕಾವ್ಯಕೃತಿಯೂ ಇನ್ನೂ ದೊರೆತಿಲ್ಲ. ಈತನ ವ್ಯಾಕರಣದ ಕೊನೆಯಲ್ಲಿ ಬರುವ ಪದ್ಯಗಳನ್ನು ಇವನೇ ರಚಿಸಿರಬೇಕು. ಈತ ಬಳಸಿದ ಶಬ್ದಪ್ರಯೋಜನದಿಂದ ಈತನ ವ್ಯಾಕರಣ ಒಂದು ಕಾವ್ಯದಂತೆ ತೋರುತ್ತದೆ. ಇಷ್ಟಂತೂ ನಿಜ.

ತ್ರಿವಿಕ್ರಮ ಧರ್ಮದಿಂದ ಜೈನ. ಇದು ಆತನ ಮಂಗಳಾಚರಣದಿಂದ ಖಚಿತಗೊಳ್ಳುತ್ತದೆ. ವೀರಸೇನ ಮತ್ತು ಜಿನಸೇನಚಾರ್ಯರಿಗೆ ಈತ ಸಲ್ಲಿಸಿದ ಗೌರವಾರ್ಥವನ್ನು ಈತ ದಿಗಂಬರಪಂಥಕ್ಕೆ ಸೇರಿದವನಾಗಿರಬೇಕು, ಹೇಮಚಂದ್ರನನ್ನು ಸ್ಮರಿಸಿಕೊಂಡಿದ್ದನ್ನು ನೋಡಿದರೆ ಇವನಿಗೆ ಶ್ವೇತಾಂಬರಪಂಥವೂ ಸೇರುತ್ತಿತ್ತು ಎಂಬುದು ಸಿದ್ಧವಾಗುತ್ತದೆ.

ಈತನ ಕಾಲದ ವಿಚಾರದಲ್ಲಿ ಏಕಾಭಿಪ್ರಾಯವಿಲ್ಲ. ಈತ ವೀರಸೇನ ಮತ್ತು ಜಿನಸೇನರ ಧವಲಾ ಜಯಧವಲಾಗಳ ಉಲ್ಲೇಖಮಾಡಿದ್ದಾನೆ. ಇವುಗಳ ಕಾಲ ಕ್ರಿ.ಶ. 9 ನೆಯ ಶತಮಾನದ ಮಧ್ಯ. ಕ್ರಿ.ಶ1172 ರಲ್ಲಿ ತೀರಿಕೊಂಡ ಹೇಮಚಂದ್ರನ ಉಲ್ಲೇಖವನ್ನೂ ಈತ ಮಾಡಿದ್ದಾನೆ. ಆದುದರಿಂದ ಈತ ಕ್ರಿ.ಶ. ಸುಮಾರು 12 ನೆಯ ಶತಮಾನದ ಕೊನೆಕೊನೆಯಲ್ಲಿದ್ದಿರಬೇಕೆಂದು ಕೆಲವರ ಮತ. ಉಪಾಧ್ಯೆಯವರ ಮೇರೆಗೆ ಈತ ತನ್ನ ವ್ಯಾಕರಣವನ್ನು ಕ್ರಿ.ಶ. 1236 ರಲ್ಲಿ ರಚಿಸಿದ. ಈತನ ತರುವಾಯದ ಸಿಂಹರಾಜ, ಲಕ್ಷ್ಮಿಧರ ಮತ್ತು ಅಪ್ಪಯ್ಯ ದೀಕ್ಷಿತರ ಪ್ರಾಕೃತವ್ಯಾಕರಣಗಳು ಉಪಲಬ್ದವಿದೆ. ಅಪ್ಪಯ್ಯದೀಕ್ಷಿತ ಕ್ರಿ.ಶ 1226 ರಲ್ಲಿ ತೀರಿಕೊಂಡ. ಲಕ್ಷ್ಮೀಧರ ಕ್ರಿ.ಶ. 1475 ಮತ್ತು 1525ರ ಸುಮಾರಿಗೆ ವಾಸಿಸಿದ್ದ. ಲಕ್ಷ್ಮೀಧರ ಮತ್ತು ಅಪ್ಪಯದೀಕ್ಷಿತರು ಸಿಂಹರಾಜನ ಉಲ್ಲೇಖವನ್ನು ಎಲ್ಲಿಯೂ ಮಾಡುವುದಿಲ್ಲ. ಸಿಂಹರಾಜ 15ನೆಯ ಶತಮಾನದ ಆರಂಭದಲ್ಲಿ ಜೀವಿಸಿರಬೇಕು. ಈ ಎಲ್ಲ ಸಮಗತಿಗಳನ್ನು ಗಮನದಲ್ಲಿಟ್ಟುಕೊಂಡು ನೋಡಿದಲ್ಲಿ ತ್ರಿವಿಕ್ರಮ 13 ನೆಯ ಶತಮಾನದ ಉತ್ತರಾರ್ಧದಲ್ಲಿ ಜೀವಿಸಿರಬೇಕೆಂದು ಹೇಳಬಹುದು.

ತ್ರಿವಿಕ್ರಮ ದಕ್ಷಿಣದೇಶದವ; ಆಂಧ್ರಪ್ರದೇಶಕ್ಕೆ ಸೇರಿದವನಾಗಿರಬೇಕು. ಕರ್ನಾಟಕದೊಡನೆ ಸಂಪರ್ಕವನ್ನಿಟ್ಟುಕೊಂಡಿದ್ದಿರಬಹುದು. ಈತನ ಪಂಥ, ತಂದೆತಾಯಿಗಳ ಸಹೋದರನ ಮತ್ತು ಗುರುವಿನ ಹೆಸರುಗಳು ಈ ಮಾತಿಗೆ ಪುಷ್ಟಿಕೊಡುತ್ತವೆ. ಈತ ಉಪಯೋಗಿಸಿದ ದೇಶಿ ಶಬ್ದಗಳು ಹೇಮಚಂದ್ರನ ದೇಶೀನಾಮಮಾಲದಲ್ಲಿ ದೊರೆಯುವುದು. ದ್ರಾವಿಡ ಶಬ್ದದಲ್ಲಿ ಇವುಗಳ ಮೂಲವನ್ನು ಕಾಣಬಹುದು. ಹೀಗಾಗಿ ಈತ ದಕ್ಷಿಣದವನೆಂಬುದು ಖಚಿತವಾಗುತ್ತದೆ.

ಈತ ಹೇಮಚಂದ್ರನ ವ್ಯಾಕರಣವನ್ನು ಆಧಾರವಾಗಿಟ್ಟುಕೊಂಡು ತನ್ನ ಪ್ರಾಕೃತ ಶಬ್ದಾನುಶಾಸನವನ್ನು ರಚಿಸಿದ್ದಾನೆ. ಈ ಗ್ರಂಥದ ಎರಡು ಹಸ್ತ ಪ್ರತಿಗಳು ಉಪಲಬ್ದವಿದೆ. ಈತ ಸೂತ್ರಗಳಲ್ಲಿ ತನ್ನವೇ ಆದ ಕೆಲವು ಪಾರಿಭಾಷಿಕ ಸಂಜ್ಞೆಗಳನ್ನು ಬಳಸಿದ್ದಾನೆ. ಅಲ್ಲದೆ ಈ ಸಂಜ್ಞೆಗಳ ಅರ್ಥವನ್ನು ಗ್ರಂಥದ ಆರಂಭದಲ್ಲಿಯೇ ಕೊಟ್ಟಿದ್ದಾನೆ. ಗ್ರಂಥದ ಪ್ರಸ್ತಾವನೆಯಲ್ಲಿ ತನ್ನ ವ್ಯಾಕರಣದ ಸಾಮಗ್ರಿಯನ್ನು ಹೇಮಚಂದ್ರನ ವ್ಯಾಕರಣದಿಂದ ತೆಗೆದುಕೊಂಡ ಬಗ್ಗೆ ಹೇಳಿಕೊಂಡಿದ್ದಾನೆ. ಈತ ನಮೂದಿಸಿದ ಶಬ್ದಗಳು ಬಹಳ ವಿಚಿತ್ರವಿದ್ದು, ಅವನ್ನು ವ್ಯಾಕರಣದ ನಿಯಮಗಳಿಗೆ ಹೊಂದಿಸುವುದು ಬಹಳ ಕಠಿಣವಾಗಿ ತೊರುತ್ತದೆ. ಇವುಗಳಲ್ಲಿ ಬಹಳಷ್ಟು ಶಬ್ದಗಳ ಅರ್ಥವನ್ನು ಶಬ್ದಗಳ ಸಹಾಯದಿಂದ ಮಾತ್ರ ಹೇಳಬಹುದು.

ಈತನ ವ್ಯಾಕರಣದಲ್ಲಿ ಮೂರು ಅಧ್ಯಾಯಗಳಿವೆ. ಪ್ರತಿಯೊಂದು ಅಧ್ಯಾಯದಲ್ಲೂ ನಾಲ್ಕು ನಾಲ್ಕು ಪಾದಗಳಿವೆ. ಮೊದಲನೆಯ ಅಧ್ಯಾಯದಲ್ಲಿ ಪ್ರಾಕೃತ ಧ್ವನಿಶಾಸ್ತ್ರವನ್ನು ವಿವರಿಸಿದ್ದಾನೆ. ಎರಡನೆಯ ಅಧ್ಯಾಯದಲ್ಲಿ ಸರ್ವನಾಮ, ಕ್ರಿಯಾಪದ ಮೊದಲಾದವುಗಳ ಸ್ವರೂಪವನ್ನು ವಿವೇಚಿಸಿದ್ದಾನೆ. ಮೂರನೆಯ ಅಧ್ಯಯದಲ್ಲಿ ಅಪಭ್ರಂಶ ಭಾಷಾಲಕ್ಷಣವನ್ನು ವರ್ಣಿಸಿದ್ದಾನೆ.

ಪಿ.ಎಲ್. ವೈದ್ಯ ಈ ವ್ಯಾಕರಣವನ್ನು ಸಂಪಾದಿಸಿದ್ದಾರೆ. ಸೊಲ್ಲಾಪುರದ ಜೈನ ಸಂಸ್ಕøತ ಸಂರಕ್ಷಕ ಸಂಘ ಇದನ್ನು ಪ್ರಕಟಿಸಿದೆ. ಗ್ರಂಥದ ಕೊನೆಗೆ ಏಳು ಪರಿಶಿಷ್ಟಗಳಿವೆ. ಮೊದಲನೆಯ ಪರಿಶಿಷ್ಟದಲ್ಲಿ ಸೂತ್ರಪಾಠಗಳನ್ನು ಎರಡನೆಯದರಲ್ಲಿ ಸೂತ್ರಗಳ ಅನುಕ್ರಮಣಿಕೆಯನ್ನು, ಮೂರನೆಯದರಲ್ಲಿ ಛಂದಶ್ಛಾಯಾ ಪನ್ನ ಸೂತ್ರಪಾಠವನ್ನು, ನಾಲ್ಕನೆಯದರಲ್ಲಿ ಅಪಭ್ರಂಶ ಪದ್ಯಾವಳಿಯನ್ನು ಐದನೆಯದರಲ್ಲಿ ದೇಶೀ ಶಬ್ದಗಳ ಸೂಚಿಯನ್ನು ಆರನೆಯದರಲ್ಲಿ ಧಾತ್ವಾದೇಶಗಳ ಸೂಚಿಯನ್ನು ಮತ್ತು ಏಳನೆಯದರಲ್ಲಿ ಭರತಮುನಿಯ ಪ್ರಾಕೃತಭಾಷಾಸ್ವರೂಪವನ್ನು ಕೊಡಲಾಗಿದೆ.						(ವಿ.ಬಿ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ